Skip to main content


ವರ್ಮ ಅವರನ್ನು ಭೇಟಿ ಮಾಡಿದ್ದು ಹೌದು

ರಾಮ್‌ ಗೋಪಾಲ್‌ ವರ್ಮ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ಧನಂಜಯ್‌ ನಟಿಸುತ್ತಿದ್ದಾರಂತೆ. ಹಾಗಂತ ಸುದ್ದಿಯೊಂದು ಕಳೆದ ಎರಡು ದಿನಗಳಿಂದ ಓಡಾಡುತ್ತಿದೆ. ಇತ್ತೀಚೆಗಷ್ಟೇ "ಆ ದಿನಗಳು' ಖ್ಯಾತಿಯ ಚೇತನ್‌, ತೆಲುಗಿನ "ರಣಂ' ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಈಗ ಧನಂಜಯ್‌ ಸಹ ಬೇರೆ ಭಾಷೆಗೆ ಹೊರಟಿದ್ದಾರೆ ಎಂದುಕೊಳ್ಳುವಾಗಲೇ, ಧನಂಜಯ್‌ ಆ ಬಗ್ಗೆ ಮಾತನಾಡಿದ್ದಾರೆ. "ಅಂದು "ಟಗರು' ಚಿತ್ರ ನೋಡಿದಾಗಲೇ, ವರ್ಮ ಅವರು ನನ್ನ ಅಭಿನಯದ ಬಗ್ಗೆ ಮೆಚ್ಚಿ ಮಾತಾಡಿದ್ದರು. ಇತ್ತೀಚೆಗೆ ಕನ್ನಡ ಮತ್ತು ತೆಲುಗಿನಲ್ಲಿ ಒಂದು ಚಿತ್ರ ಮಾಡೋಣ ಎಂದು ಹೇಳಿ ಕಳಿಸಿದ್ದರು. 

ಅದರಂತೆ ಹೈದರಾಬಾದ್‌ಗೆ ಹೋಗಿ ಭೇಟಿ ಮಾಡಿಕೊಂಡು ಬಂದೆ. ಚಿತ್ರ ಮಾಡೋಣ ಅಂತ ಹೇಳಿದ್ದಾರಾದರೂ, ಸದ್ಯಕ್ಕೆ ಇನ್ನೂ ಯಾವುದೂ ಪಕ್ಕಾ ಆಗಿಲ್ಲ' ಎನ್ನುತ್ತಾರೆ ಧನಂಜಯ್‌. ಈ ಮಧ್ಯೆ ಧನಂಜಯ್‌ ಅಭಿನಯಿಸಲಿರುವ ಹೊಸ ಚಿತ್ರದ ಹೆಸರು ಪಕ್ಕಾ ಆಗಿದೆ. ಈ ಹಿಂದೆ ಸೂರಿ ನಿರ್ದೇಶನದ ಚಿತ್ರದಲ್ಲಿ ಧನಂಜಯ್‌ ಹೀರೋ ಆಗಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತಾದರೂ, ಚಿತ್ರದ ಹೆಸರು ಫಿಕ್ಸ್‌ ಆಗಿರಲಿಲ್ಲ. ಈಗ ಚಿತ್ರಕ್ಕೆ "ಪಾಪ್‌ಕಾರ್ನ್ ಮಂಕಿ ಟೈಗರ್‌' ಎಂಬ ಹೆಸರನ್ನು ಇಡಲಾಗಿದೆಯಂತೆ. ಹೆಸರು ವಿಲಕ್ಷಣವಾಗಿದೆಯಾದರೂ, ಕಥೆಗೆ ಆ ಹೆಸರೇ ಸೂಕ್ತ ಎಂದನಿಸಿ, ನಿರ್ದೇಶಕ ಸೂರಿ ಅದೇ ಹೆಸರನ್ನು ಪಕ್ಕಾ ಮಾಡಿಕೊಂಡಿದ್ದಾರೆ.          

short by Pawan / more at Udayavani

Comments