Skip to main content


ನಾಸಾದಿಂದ ಮಂಗಳ ಗ್ರಹಕ್ಕೆ 'ಕ್ಯೂಬ್‌ಸ್ಯಾಟ್ಸ್‌'

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ನಾಸಾ' ಮಂಗಳಗ್ರಹದ ಕಂಪನಗಳ ಅಧ್ಯಯನಕ್ಕೆ ಶನಿವಾರ ಉಡಾವಣೆ ಮಾಡಿರುವ 'ಇನ್‌ಸೈಟ್' ಗಗನನೌಕೆ ಜತೆಗೆ 'ಕ್ಯೂಬ್‌ಸ್ಯಾಟ್ಸ್‌' ಹೆಸರಿನ ಸಣ್ಣಗಾತ್ರದ ಎರಡು ಉಪಗ್ರಹಗಳನ್ನೂ ಉಡಾವಣೆ ಮಾಡಿದೆ. ಈ ಉಪಗ್ರಹಗಳು ಸೌರಮಂಡಲ ಪ್ರವೇಶಿಸಿದ್ದು, ಸಮರ್ಥವಾಗಿವೆ ಎಂಬ ಕುರಿತು 'ನಾಸಾ' ರೇಡಿಯೊ ಸಂದೇಶ ಸ್ವೀಕರಿಸಿದೆ. ಕ್ಯಾಲಿಫೋರ್ನಿಯಾದ ವ್ಯಾಂಡೆನ್‌ಬರ್ಗ್‌ ವಾಯುನೆಲೆಯಿಂದ ಇನ್‌ಸೈಟ್‌ ಗಗನನೌಕೆ ಜತೆಗೆ ಈ ಎರಡು ಉಪಗ್ರಹಗಳನ್ನು ಒಳಗೊಂಡಿದ್ದ 'ಮಾರ್ಸ್ ಕ್ಯೂಬ್ ಒನ್‌' ಎಂಬ ಗಗನನೌಕೆಯನ್ನೂ ಉಡಾವಣೆ ಮಾಡಲಾಗಿತ್ತು. ಇದರಲ್ಲಿ ಬ್ರೀಫ್‌ಕೇಸ್‌ ಗಾತ್ರದ ಮಾರ್ಕೊ-ಎ ಮತ್ತು ಮಾರ್ಕೊ-ಬಿ ಎಂಬ ಎರಡು ಉಪಗ್ರಹಗಳಿವೆ. ಇವನ್ನು ಒಟ್ಟಾಗಿ 'ಮಾರ್ಕೊ ಕ್ಯೂಬ್‌ಸ್ಯಾಟ್ಸ್‌' ಎಂದು ಹೆಸರಿಸಲಾಗಿದೆ. 'ಗಗನನೌಕೆ ರಚಿಸುವುದು ಹೇಗೆ ಎಂಬುದನ್ನು ಬೋಧಿಸಲು ಈ ಕ್ಯೂಬ್‌ಸ್ಯಾಟ್‌ ಉಪಗ್ರಹಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಇಂದು ಇವುಗಳನ್ನು ಖಾಸಗಿ ಕಂಪನಿಗಳು ಮತ್ತು ಕೆಲ ಸಂಶೋಧನಾ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಇವು ತಲಾ 2.5 ಕೆ.ಜಿ ತೂಕ ಹೊಂದಿವೆ' ಎಂದು ಮಾರ್ಕೊ ಯೋಜನೆಯ ಮುಖ್ಯ ಎಂಜಿನಿಯರ್, ನಾಸಾದ ಜೆಟ್‌ ಪ್ರಪಲ್ಶನ್‌ ಪ್ರಯೋಗಾಲಯದ ಆಯಂಡಿ ಕ್ಲೆಷ್ ತಿಳಿಸಿದ್ದಾರೆ.                


Short by Prajwal / more at Prajavani

Comments