Skip to main content


ಬೆಂಬಲಿಗರಿಲ್ಲದೇ ಬಣಗುಟ್ಟುತ್ತಿದೆ ಮಾಜಿ ಸಿಎಂ ಮನೆ – ಮೌನಕ್ಕೆ ಶರಣಾದ ಯಡಿಯೂರಪ್ಪ

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಫುಲ್ ಗಿಜಿ ಗಿಜಿ ಅಂತಿದ್ದ ಬಿಎಸ್ ಯಡಿಯೂರಪ್ಪ ನಿವಾಸ ಈಗ ಬಿಕೋ ಅಂತಿದೆ. ಫಲಿತಾಂಶದ ಬಳಿಕ ಧವಳಗಿರಿ ನಿವಾಸದಲ್ಲಿ ಸಭೆಗಳ ಮೇಲೆ ಸಭೆಗಳು ನಡೆದಿತ್ತು. ರಾಜಕೀಯ ನಾಯಕರು, ಬೆಂಬಲಿಗರಿಂದ ಬಿಎಸ್‍ವೈ ನಿವಾಸ ತುಂಬಿ ಹೋಗಿತ್ತು. ಆದ್ರೆ ಶನಿವಾರ ಸಂಜೆ ಬಿಎಸ್‍ವೈ ರಾಜೀನಾಮೆ ನೀಡಿದ ಬಳಿಕ ಮನೆ ಖಾಲಿಯಾಗಿದೆ. ಇತ್ತ ನಾನೇ ಮುಖ್ಯಮಂತ್ರಿ ಅಂತ ಸಿಎಂ ಪಟ್ಟ ಅಲಂಕರಿಸಿದ್ದ ಕೇವಲ 55 ಗಂಟೆಗಳಲ್ಲೇ ಯಡಿಯೂರಪ್ಪ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡು ಇದೀಗ ಮೌನಕ್ಕೆ ಶರಣಾಗಿದ್ದಾರೆ. ಚುನಾವಣಾ ಫಲಿತಾಂಶಕ್ಕೂ ಮೊದಲೇ ಫುಲ್ ಜೋಶ್ ನಿಂದ ನಾನೇ ಮುಂದಿನ ಸಿಎಂ ಅಂತ ಹೇಳಿದ್ದರು. ಫಲಿತಾಂಶದಲ್ಲೂ ಬಿಜೆಪಿ ಬಹುಮತ ಪಡೆದಿತ್ತು. ಆದ್ರೆ ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ತರಾತುರಿಯಾಗಿ ರಾಜ್ಯಪಾಲರ ಅನುಮತಿಯಂತೆ ಬಿಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಮಾಡಿಯೇ ಬಿಟ್ಟರು.

ಬಿಎಸ್‍ವೈ ಪ್ರಮಾಣವಚನವನ್ನು ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಿಜೆಪಿ ಶನಿವಾರ ಸಂಜೆಯೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡುವಂತೆ ಸೂಚನೆ ನೀಡಿತ್ತು. ಈ ನಡುವೆ ರಾಜ್ಯ ರಾಜಕಾರಣದಲ್ಲಿ ಹಲವು ಹೈಡ್ರಾಮಾಗಳೇ ನಡೆದು ಹೋದವು. ಕೊನೆಗೆ ಬಿಎಸ್ ವೈ ಅವರು ವಿಶ್ವಾಸ ಮತ ಸಾಬೀತು ಮಾಡಲು ಸಾಧ್ಯವಾಗದೇ ಭಾವನಾತ್ಮಕ ಭಾಷಣ ಮಾಡಿ ವಿಧಾನಸಭೆಯಿಂದ ನೇರವಾಗಿ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.   

short by Pawan / more at Public Tv

Comments