Skip to main content


ಸುನಿಲ್ ಎಂಬ ಹೆಸರಿನ ದಕ್ಷಿಣ ಕನ್ನಡದ ಹುಡುಗನ ನೆನಪಿದೆಯಾ!?

ಎರಡು ದಶಕಗಳ ಹಿಂದೆ ಕಾರು ಅಪಘಾತವೊಂದರಲ್ಲಿ ಬದುಕು ಮುಗಿಸಿ ಹೊರಟು ಹೋದ ಕನ್ನಡ ಚಿತ್ರರಂಗದ ಸ್ಪುರದ್ರೂಪಿ ಯುವ ಕಲಾವಿದ. ‘ಶ್ರುತಿ’, ‘ಬೆಳ್ಳಿ ಕಾಲುಂಗುರ’…ಮೊದಲಾದ ಹಿಟ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ ಹುಡುಗ ಈವತ್ತು ಬದುಕಿರುತ್ತಿದ್ದರೆ ಬೆಳ್ಳಿತೆರೆಯ ‘ಸ್ಟಾರ್’ ಆಗಿ ಮೆರೆಯ ಬಹುದಿತ್ತು. ಆದರೆ ದುರಾದೃಷ್ಟವಶಾತ್ ಆಕಾಶದ ‘ಸ್ಟಾರ್’ ಆಗಿಬಿಟ್ಟ! ಆ ಕಾಲದ ಸ್ಟಾರ್ ನಾಯಕಿಯೊಬ್ಬಳ ಜೊತೆ ಸುನಿಲ್’ನ ಹೆಸರು ಬೆಸೆದುಕೊಂಡಿತ್ತು. ಆಗಿನ ಪತ್ರಿಕೆಗಳಲ್ಲಿ ಸಣ್ಣಗೆ ಶುರುವಾದ ಗಾಸಿಪ್ ಬೆಳೆದು ದೊಡ್ಡದಾಗಿ ತನ್ನ ಸಿನೆಮಾ ಭವಿಷ್ಯವನ್ನೇ ಬಲಿ ತೆಗೆದುಕೊಳ್ಳುವ ಭಯದಿಂದ ಸುನಿಲ್ ನನಗೆ ಫೋನ್ ಮಾಡಿ ಹೀಗೆ ಹೇಳಿಕೊಂಡಿದ್ದ.

ಆ ನಟಿಯ ಜೊತೆ ನನ್ನ ಹೆಸರು ಸೇರಿಸಿಕೊಂಡು ವೃಥಾ ಗಾಳಿ ಸುದ್ದಿ ಹರಡುತ್ತಿದ್ದಾರೆ. ನಿಜ, ಆಕೆ ನನ್ನನ್ನು ಪ್ರಮೋಟ್ ಮಾಡುತ್ತಿರುವುದು ಹದಿನಾರಾಣೆ ಸತ್ಯ! ಈಗಲೂ ನಾನು ಆಕೆಯ ಜೊತೆ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದೇನೆ. ಆಕೆಯೇ ನನ್ನನ್ನು ತನ್ನ ಜೊತೆ ಕರೆದುಕೊಂಡು ಬಂದಿದ್ದಾಳೆ. ನಿಮ್ಮ ಜೊತೆ ತುಂಬಾ ತುಂಬಾ ಮಾತಾಡೋದಿದೆ. ಮುಂದೇನು ಮಾಡಬೇಕೆನ್ನುವುದನ್ನು ನೀವೇ ಗೈಡ್ ಮಾಡಬೇಕು. ಎರಡು ದಶಕಗಳ ಹಿಂದೆ ಸುನಿಲ್ ದಾವಣಗೆರೆ ಬಳಿಯ ಊರೊಂದರಿಂದ ಫೋನ್ ಮಾಡಿ ಆಡಿರುವ ಮಾತಿನ್ನೂ ನೆನಪಿದೆ. ಹೀಗೆ ಫೋನ್ ಮಾಡಿದ ಮಾರನೇ ದಿನವೇ ಬಂದ ಸುದ್ದಿಯೆಂದರೆ ಸುನಿಲ್ ಸಾವು! ಕಾರ್ಯಕ್ರಮ ಮುಗಿಸಿ ದಾವಣಗೆರೆ ಬಳಿ ಬರುವಷ್ಟರಲ್ಲಿ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಸುನಿಲ್ ಮತ್ತು ಆ ನಟಿ ಕುಳಿತಿದ್ದ ಕಾರನ್ನು ಅಪ್ಪಚ್ಚಿ ಮಾಡಿ ಹಾಕಿತ್ತು.        

short by Pawan / more at Karunaaduu

Comments