Skip to main content


ಈ ಆಟೋ ಚಾಲಕ ಗರ್ಭಿಣಿಯರಿಗೆ, ಅಂಗವಿಕಲರಿಗೆ ಹಾಗೂ ಅಸಹಾಯಕರಿಗೆ ಉಚಿತ ಪ್ರಯಾಣ ನೀಡುತ್ತಿರೋ ಹೆಮ್ಮೆಯ ಕನ್ನಡಿಗ

ಸಮಾಜದ ಸೇವೆ ಸಲ್ಲಿಸಲು ಶ್ರೀಮಂತನಾಗಬೇಕಿಲ್ಲ. ಉತ್ತಮ ಹೃದಯ ಮತ್ತು ಉದಾರ ಮನಸ್ಸಿದ್ದರೆ ಸಾಕು ಎಂದು ಕರ್ನಾಟಕದ ಆಟೊ ಚಾಲಕರೊಬ್ಬರು ಸಾಧಿಸಿ ತೋರಿಸಿದ್ದಾರೆ.

ಮುನ್ನೇಶ ಮನಗುಳಿ ಎಂಬ ಇವರು ಗರ್ಭಿಣಿಯರಿಗೆ, ಅಂಗವಿಕಲರಿಗೆ, ಅಸಹಾಯಕರಿಗೆ ಹಾಗು ಸೈನಿಕರಿಗೆ ೨೦೧೫ ರಿಂದ ಉಚಿತ ಪ್ರಯಾಣವನ್ನು ನೀಡುತ್ತಿದ್ದಾರೆ.


೪೨ ವಯಸ್ಸಿನ ಇವರು ಬಿ.ಎ. ಪದವಿ ಪಡೆದು, ಆಟೊ ಚಾಲಕ ವೃತ್ತಿ ಪ್ರಾರಂಭಿಸಿರುತ್ತಾರೆ. ಸ್ವಂತ ಆಟೋವನ್ನು ಖರೀದಿಸಲು ಸಾಧ್ಯವಾಗದೆ, ೨೫೦ ರೂ ಬಾಡಿಗೆ ಕಟ್ಟುತ್ತಾ ೧೧ ವರ್ಷ ದುಡಿಯುತ್ತಿರುವರು. ಯಾವುದೇ ಸಂದರ್ಭದಲ್ಲಿ, ಸಮಯದಲ್ಲೂ ಕರೆದ ತಕ್ಷಣ ಬರುವರು.

“ದಿ ಹಿಂದು” ಪತ್ರಿಕಾ ಸಂದರ್ಶನದಲ್ಲಿ ಮನಗುಳಿಯವರು ಮಾತನಾಡಿದ್ದಾಗ ಹೀಗೆಂದು ನುಡಿದರು,”ನನ್ನ ಈ ಉಚಿತ ಕಾರ್ಯಗಳು ಯಾರ್ಯಾರಿಗೆ ಎಂದು ನಾನು ಸ್ಪಷ್ಟವಾಗಿ ಬರೆದಿದ್ದೇನೆ. ಅಂತಹ ಜನರು ನಾನು ಒದಗಿಸಿದ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಹಲವರೊಂದಿಗೆ ನನ್ನ ದೂರವಾಣಿ ಸಂಖ್ಯೆಯಿದೆ. ಒಂದು ವೇಳೆ ನಾನು ಆಸ್ಪತ್ರೆಯಿಂದ ಬಂದರೆ, ಅಂತಹ ಜನರನ್ನು ಅವರ ಮನೆ, ಬಸ್ ನಿಲ್ದಾಣ, ಅವರಿಗೆ ಸೂಕ್ತವೆನಿಸುವ ಸ್ಥಳಕ್ಕೆ ಬಿಟ್ಟು ಬರುತ್ತೇನೆ.”

“ಇಂತಹ ಯೋಜನೆ ಬಿತ್ತಲು ಕಾರಣವೇನು?” ಎಂದು ಅವರಲ್ಲಿ ಕೇಳಿದಾಗ, ೧೯೯೨ರಂದು ನಡೆದ ಘಟನೆಯೊಂದನ್ನು ನೆನೆಯುತ್ತಾರೆ. ಅಂದು, ಬಸವನಬಾಗೇವಾಡಿ ತಾಲೂಕಿನ ನಾರಾಯಣಪುರ ಎಂಬ ಹಳ್ಳಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನವಿರದೆ ತುಂಬು ಗರ್ಭಿಣಿಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಅವರ ಮನಸ್ಸಿನಲ್ಲಿ ಹಾಗಯೇ ಉಳಿದಿತ್ತು. ತದನಂತರ ತನ್ನದೇ ವಾಹನ ಬಂದ ಮೇಲೆ ಅಂತಹ ಘಟನೆ ಇನ್ನೊಮ್ಮೆ ನಡೆಯಬಾರದೆಂದು ಅಂತಹವರಿಗೆ ಶುಲ್ಕ ರಹಿತ ಪ್ರಯಾಣವನ್ನು ಎಡೆ ಮಾಡಿಕೊಟ್ಟರು.


೨೦೧೫ರಿಂದ ಇಂತಹ ಯೋಜನೆ ನಡೆಸಿದ್ದ ಇವರು ಸುಮಾರು ೨೦೦೦ ಜನರ ನಗುವಿಗೆ ಕಾರಣರಾಗಿದ್ದಾರೆ.

ನಾನು, ನಾನು ಎಂಬ ಸ್ವಾರ್ಥ ಭಾವನೆಯಿರುವ ಜನರ ನಡುವೆ, ಲೋಕದ ಕಲ್ಯಾಣಕ್ಕಾಗಿ ಶ್ರಮಿಸುವ ನಿಸ್ವಾರ್ಥ ಮನೋಭಾವವಿರುವ ಮುನ್ನೇಶರಂತಹವರನ್ನು ನಾವು ಮೆಚ್ಚಬೇಕು.

Comments