Skip to main content


ಕಾಂಗ್ರೆಸ್‌: ಮಂತ್ರಿಗಿರಿಗೆ ಹಿರಿ-ಕಿರಿಯರ ಪೈಪೋಟಿ

ಮಿತ್ರ ಪಕ್ಷದೊಂದಿಗೆ ಖಾತೆ ಹಂಚಿಕೆಯ ಬಿಕ್ಕಟ್ಟು ಪರಿಹರಿಸಿಕೊಂಡಿರುವ ಕಾಂಗ್ರೆಸ್‌, ಸಚಿವ ಸಂಪುಟ ಸೇರ್ಪಡೆಗಾಗಿ ದುಂಬಾಲು ಬಿದ್ದಿರುವ ಶಾಸಕರನ್ನು ತೃಪ್ತಿಪಡಿಸುವುದು ಹೇಗೆ ಎಂಬ ಇಕ್ಕಟ್ಟಿಗೆ ಸಿಲುಕಿದೆ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡಿರುವುದರ ಜೊತೆಗೆ ಬಿಜೆಪಿಯ ಗಾಳಕ್ಕೆ ಸಿಲುಕಿ ಪಕ್ಷಾಂತರ ಮಾಡಬಹುದಾದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆಯೊಂದಿಗೆ ಸಚಿವ ಸ್ಥಾನ ಹಂಚಿಕೆ ಮಾಡುವ ಸವಾಲನ್ನು ಪಕ್ಷ ಎದುರಿಸುತ್ತಿದೆ.

ಉಪ ಮುಖ್ಯಮಂತ್ರಿ ಸ್ಥಾನ ಬಿಟ್ಟು, ಸಂಪುಟದಲ್ಲಿನ 21 ಸ್ಥಾನಗಳನ್ನು ಭರ್ತಿ ಮಾಡಬೇಕಿರುವ ಪಕ್ಷವು ಪ್ರಭಾವ, ಜಾತಿ ಮತ್ತು ಪ್ರಾಂತ್ಯವಾರು ಲೆಕ್ಕಾಚಾರದೊಂದಿಗೆ ಹಿರಿಯರು ಮತ್ತು ಕಿರಿಯರನ್ನು ಒಳಗೊಂಡ ಪಟ್ಟಿಯನ್ನು ಸಿದ್ಧಪಡಿಸಿದೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ವಿದೇಶ ಪ್ರವಾಸದಿಂದ ಮರಳಿದ ನಂತರ ಯಾರು ಸಚಿವರಾಗಲಿದ್ದಾರೆ ಎಂಬುದು ನಿರ್ಧಾರವಾಗಲಿದೆ. ಕಳೆದ ವಾರವೇ ದೆಹಲಿಗೆ ಧಾವಿಸಿ ಹೈಕಮಾಂಡ್‌ ಗಮನ ಸೆಳೆದಿರುವ ಕೆಲವು ಆಕಾಂಕ್ಷಿಗಳು ಭಾನುವಾರ ಮತ್ತೆ ದೆಹಲಿಗೆ ದೌಡಾಯಿಸಲಿದ್ದಾರೆ. ಸೋಮವಾರ ರಾತ್ರಿಯ ವೇಳೆಗೆ ಸಭೆ ನಡೆಸಲಿರುವ ರಾಹುಲ್‌ ಗಾಂಧಿ ಅಂತಿಮ ಪಟ್ಟಿಗೆ ಒಪ್ಪಿಗೆ ಸೂಚಿಸಲಿದ್ದಾರೆ ಎಂದು ತಿಳಿದುಬಂದಿದೆ.     

short by Pawan / more at Prajavani

Comments