Skip to main content


ಪರಭಾಷಾ ಚಿತ್ರಗಳನ್ನೇ ಮೀರಿಸುವಂತಿರ‍್ತಾನಾ ವಿಲನ್?

ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಕಾರ್ಯಕ್ರಮಕ್ಕೆ ತಮ್ಮ ಬಹು ಕಾಲದ ಗೆಳೆಯ ಕಂ ನಿರ್ಮಾಪಕ ಸಿ ಆರ್ ಮನೋಹರ್ ಮೇಲಿನ ಸ್ನೇಹದಿಂದ, ಕಿಚ್ಚಾ ಸುದೀಪ್, ಶಿವರಾಜ್ ಕುಮಾರ್ ಹಾಗೂ ಪ್ರೇಮ್ ಬಗೆಗಿನ ಅಕ್ಕರೆಯಿಂದ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಟೀಸರ್ ಅನಾವರಣಗೊಳಿಸಿ ಶುಭ ಕೋರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪರಭಾಷಾ ಚಿತ್ರಗಳನ್ನೇ ಮೀರಿಸುವಂಥಾ ಚಿತ್ರಗಳು ನಿರ್ಮಾಣವಾಗುತ್ತಿವೆ ಅಂತ ಮೆಚ್ಚುಗೆ ಸೂಚಿಸಿರುವ ಮುಖ್ಯಮಂತ್ರಿಗಳು, ದಿ ವಿಲನ್ ಟೀಸರ್ ನೋಡಿದರೆ ಈ ಚಿತ್ರವೂ ಅದೇ ಸಾಲಿನಲ್ಲಿರುವಂತೆ ಭಾಸವಾಗುತ್ತಿದೆ ಎಂಬ ಭರವಸೆಯ ಮಾತುಗಳನ್ನೂ ಆಡಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿ ಟೀಸರ್ ಬಿಡುಗಡೆ ಸಮಾರಂಭಕ್ಕೆ ಟಿಕೆಟ್ ಪಡೆದು ಬಂದ ಅಭಿಮಾನಿಗಳನ್ನೂ ಕೂಡಾ ಕುಮಾರಸ್ವಾಮಿಗಳು ಅಭಿನಂದಿಸಿದ್ದಾರೆ.

ತುಂಬಾ ಕಾಲದಿಂದ ಕಿಚ್ಚಾ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳು ವಿಲನ್ ಚಿತ್ರದ ಟೀಸರ್‌ಗಾಗಿ ಕಾತರದಿಂದ ಕಾದಿದ್ದರು. ಈಗ ಬಿಡುಗಡೆಯಾಗಿರೋ ಎರಡೂ ಟೀಸರ್‌ಗಳನ್ನು ನೋಡಿ ಎಲ್ಲರೂ ತೃಪ್ತರಾಗಿದ್ದಾರೆ. ಶಿವಣ್ಣ ಹೊಸಾ ಲುಕ್ಕು, ಅದೇ ಖದರಿನಿಂದ ಕಾಣಿಸಿಕೊಂಡರೆ, ಕಿಚ್ಚಾ ಸುದೀಪ್ ಕೂಡಾ ಹೊಸಾ ಸ್ಟೈಲಿನಲ್ಲಿ ಡಿಫರೆಂಟಾದ ರೀತಿಯಲ್ಲಿ ಅಭಿಮಾನಿಗಳಿಗೆ ಮುದ ನೀಡಿದ್ದಾರೆ. ಈ ಟೀಸರಿನ ಅದ್ದೂರಿ ಮೇಕಿಂಗ್‌ನ ಬಗ್ಗೆಯೂ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.         

short by Pawan / more at Cinibuzz